Tag Archives: Embarq

#6 ನೆರೆ ಹೊರೆ ಸುಧಾರಣೆ ಯೋಜನೆ – ಸಂಜಯ್ ಶ್ರೀಧರ್

೩೧ ಜನವರಿಯಂದು ಎಂಬಾರ್ಕ್ ಸಂಸ್ಥೆಯ ಸಂಜಯ್ ಶ್ರೀಧರ್ ಅವರು ಆಯಾ ವಾರ್ಡ್ ಅಲ್ಲಿ ಅಲ್ಲಿನ ಅಲ್ಲಿನ ಮೂಲಭೂತ ಸೌಕರ್ಯಗಳ ಸುಧಾರಣೆಯನ್ನು ನಾಗರೀಕರ ಪಾಲ್ಗೊಳ್ಳುವಿಕೆಯಲ್ಲಿ ಹೇಗೆ ಮಾಡಬಹುದು ಅನ್ನುವುದರ ಬಗ್ಗೆ ಬಿಕ್ಲಿಪ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರ ಮಾತಿನ ಮುಖ್ಯಾಂಶಗಳು:

1. ಯಾವುದೇ ನಗರಕ್ಕೆ ಸಂಬಂಧಿಸಿದ ಯೋಜನೆಗಳ ವಿನ್ಯಾಸ ಯಾವತ್ತು ಜನರ
ಅನುಕೂಲ ತಲೆಯಲ್ಲಿರಿಸಿಕೊಂಡು ರೂಪಿಸಬೇಕೇ ಹೊರತು ಅಧಿಕಾರಿಗಳ ಇಲ್ಲವೇ ಹಣದ ಲೆಕ್ಕಾಚಾರದಲ್ಲಲ್ಲ.

2. ವಿದೇಶದಲ್ಲಿನ ಹಲವು ಒಳ್ಳೆಯ ಯೋಜನೆಗಳನ್ನು ಇಲ್ಲಿ ತಂದು ಜಾರಿ ಮಾಡುವಾಗ ಅವು ನಮ್ಮ ಸಂದರ್ಭಕ್ಕೆ, ನಮ್ಮ ಅಗತ್ಯಕ್ಕೆ ತಕ್ಕಂತೆ ಇವೆಯೇ ಅನ್ನುವ ಮುನ್ನೆಚ್ಚರಿಕೆ ವಹಿಸಬೇಕು ಇಲ್ಲದಿದ್ದಲ್ಲಿ ಅವು ಪರಿಹಾರ ಕೊಡುವುದಕ್ಕಿಂತ ಸಮಸ್ಯೆಯನ್ನೇ ಉಲ್ಬಣಗೊಳ್ಳುವಂತೆ ಮಾಡಬಹುದು.

3. ಒಂದು ವಾರ್ಡಿನಲ್ಲಿ ನಡೆಯುವ ಎಲ್ಲ ಯೋಜನೆಗಳನ್ನು ಪ್ರತ್ಯೇಕವಾಗಿ ನೋಡದೇ
ಅವುಗಳನ್ನು ಬೆಸೆಯುವ ಬಗೆಯನ್ನು ಆಲೋಚಿಸಬೇಕು. ಉದಾಹರಣೆಗೆ ವಾರ್ಡಿನ ಎರಡು ಮೂಲೆಯಲ್ಲಿ ಪಾರ್ಕ್ ಕಟ್ಟುವ ಕೆಲಸವಾದರೆ, ಅವುಗಳನ್ನು ಪ್ರತ್ಯೇಕವಾಗಿ ನೋಡದೇ ಒಂದು ಪಾರ್ಕಿನಿಂದ ಇನ್ನೊಂದು ಪಾರ್ಕಿಗೆ ಜನರು ನಡೆದುಕೊಂಡು ಹೋಗಲು ಅನುಕೂಲವಾಗಬೇಕು ಅನ್ನುವ ಆಲೋಚನೆ ಇಟ್ಟುಕೊಂಡು ವಿನ್ಯಾಸ ಮಾಡಬೇಕು. ಒಮ್ಮೆ ಯೋಜನೆಗಳನ್ನು ಬೆಸೆಯುವ ಮನಸ್ಥಿತಿಯಿಂದ ಯೋಜನೆಗಳನ್ನು ರೂಪಿಸಲು ಆರಂಭಿಸಿದರೆ ಆಗ ಅವುಗಳನ್ನು ಜಾರಿಗೆ ತರಲು ಬೇಕಿರುವ ಹಣಕಾಸು ಹೊಂದಿಸುವುದು ಮತ್ತು ಅವುಗಳ ಅನುಷ್ಟಾನದಲ್ಲೂ ಈ ಚಿಂತನೆ ಕಾಣಿಸಲು ಆರಂಭಿಸುತ್ತದೆ ಮತ್ತು ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

4. ಪ್ರತಿ ವಾರ್ಡಿನಲ್ಲಿ 20% ಜಾಗ ಮುಕ್ತ ಸ್ಥಳವಾಗಿರಬೇಕು ಅನ್ನುವ ನಿಯಮವಿದ್ದರೂ ಆ 20% ಜಾಗ ಇಡೀ ವಾರ್ಡಿನ ತುಂಬ ಹಂಚಿದಂತೆ ಹರಡಿಕೊಂಡಿರುತ್ತೆ ಮತ್ತು ಅವುಗಳನ್ನು ಬೆಸೆಯುವ ಸಂಪರ್ಕ ಮಾರ್ಗಗಳೇ ಇರಲ್ಲ. ಪಾದಚಾರಿಗಳು ಸುರಕ್ಷಿತವಾಗಿ ಈ 20% ಜಾಗವನ್ನು ಬಳಸಲಾಗುವಂತೆ ನಾವು
ಅವುಗಳನ್ನು ಬೆಸೆಯುವಂತೆ ನಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

5. ಕೆರೆಗಳು ಒಂದು ವಾರ್ಡಿನ ಜೀವಸೆಲೆಯಿದ್ದಂತೆ. ಬೆಂಗಳೂರಿನ ಕೆರೆಗಳು ಐತಿಹಾಸಿಕವಾಗಿ ಒಂದಕ್ಕೊಂದು ಬೆಸೆದುಕೊಂಡಂತೆ ವಿನ್ಯಾಸಗೊಂಡತವು. ಒಂದು ಚಿಕ್ಕ ಕೆರೆ ತುಂಬಿದರೆ ಅದು ಹರಿದು ಇನ್ನೊಂದು ದೊಡ್ಡ ಕೆರೆಗೆ ಸೇರುವ ರೀತಿಯಲ್ಲಿ ಅವುಗಳನ್ನು ರೂಪಿಸಲಾಗಿತ್ತು. ಆದರೆ ಇಂದು ತಲೆಬುಡವಿಲ್ಲದ ಅಭಿವ್ರದ್ಧಿಯಲ್ಲಿ ಕೆರೆಗಳ ನಡುವಿನ ನೈಸರ್ಗಿಕವಾದ ಈ ಕೊಂಡಿ ಕಳಚಿಹೋಗಿದೆ. ತಕ್ಷಶಿಲಾ ಸಂಸ್ಥೆಯ ಸ್ವತ್ತು ಕೆರೆಗಳು ಹಲವು ವಾರ್ಡ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವುದರಿಂದ ಇಂತಹ ವಿಷಯದಲ್ಲಿ ಹಲವು ವಾರ್ಡಿನ ಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕು.

6. ಕಳೆದ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ 330 ಪಾದಚಾರಿಗಳು ರಸ್ತೆ ದಾಟುವಾಗ
ಸಾವನ್ನಪ್ಪಿದ್ದಾರೆ. ಇದು ನಮ್ಮಲ್ಲಿ ಪಾದಚಾರಿ ಮಾರ್ಗಗಳ ಕೊರತೆಯನ್ನು ಎತ್ತಿ ತೋರುತ್ತಿವೆ. ಇದು ನಗರ ತಲೆ ತಗ್ಗಿಸಬೇಕಾದ ವಿಚಾರವಾಗಿದೆ.

7. ಸಂವಿಧಾನದ 74ನೆ ವಿಧಿಯನ್ವಯ ಒಂದು ವಾರ್ಡಿನಲ್ಲಿ ನಾಗರೀಕ ಸೇವೆ ಕಲ್ಪಿಸುವ ಅಲ್ಲಿನ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತಂದು ಅವರ ನಡುವೆ ಸಮನ್ವಯ ಏರ್ಪಡುವಂತೆ ಮಾಡುವ ಸಂವಿಧಾನಿಕ ಹಕ್ಕು ಜನರಿಗಿದೆ.

8. ನಮ್ಮಲ್ಲಿನ ವಸತಿ ಸೌಲಭ್ಯ ಬಡವರು ಮತ್ತು ಸಿರಿವಂತರನ್ನು ದೂರ ದೂರವಿರಿಸುವ
ರೀತಿಯಲ್ಲಿದೆ. ಸಿರಿವಂತರು ವಾಸಿಸುವ ಸ್ಥಳಕ್ಕೆ ಹತ್ತಿರದಲ್ಲೇ ಬಡವರು ವಾಸಿಸುವ ಹಾಗಿರಬೇಕು. ಅದು ಇಬ್ಬರಿಗೂ ಅನುಕೂಲ ಕಲ್ಪಿಸುವಂತದ್ದು ಮತ್ತು ಅದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ಹತ್ತಿರವಾದದ್ದು.

9. ಬೆಂಗಳೂರಿನ 52% ಜನರು ಬಿ.ಎಮ್.ಟಿ.ಸಿ ಬಳಸುತ್ತಾರೆ. 12% ಜನರು ತಮ್ಮ ಕಾರು ಬಳಸುತ್ತಾರೆ. ಆದರೆ ನಮ್ಮ ಅಭಿವ್ರದ್ಧಿಯ ಗಮನವೆಲ್ಲವೂ ಈ ಕಾರುಗಳಿಗೆ ಹೇಗೆ ಹೆಚ್ಚು ರಸ್ತೆ ಒದಗಿಸುವುದು, ಕಾರುಗಳ ಓಡಾಟಕ್ಕೆ ಟ್ರಾಫಿಕ್ ಕಡಿಮೆ ಮಾಡುವುದು ಹೇಗೆ ಅಂಬುದಕ್ಕೆ ಸೀಮಿತವಾಗಿದೆ. ಇದು ಬದಲಾಗಬೇಕು. ನಮ್ಮ ಗಮನ ಯಾವತ್ತಿಗೂ ಅತಿ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸುವುದು ಹೇಗೆ ಅನ್ನುವುದರತ್ತ ಇರಬೇಕು.

10. ಯಾವುದೇ ಯೋಜನೆ ರೂಪಿಸುವಾಗ ವಾರ್ಡ್ ಮಟ್ಟದಲ್ಲಿ ಅಲ್ಲಿನ ವಸತಿ ಸಂಘಗಳು, ವ್ಯಾಪಾರಿಗಳು ಸೇರಿದಂತೆ ಎಲ್ಲರ ಅನಿಸಿಕೆ ತಿಳಿದು ಅವುಗಳ ಆಧಾರದ ಮೇಲೆ ಯೋಜನೆ ರೂಪಿಸಿದರೆ ಅದು ಹೆಚ್ಚು ಜನಪರವಾಗಿರುತ್ತೆ.