Category Archives: Kannada notes

#6 ನೆರೆ ಹೊರೆ ಸುಧಾರಣೆ ಯೋಜನೆ – ಸಂಜಯ್ ಶ್ರೀಧರ್

೩೧ ಜನವರಿಯಂದು ಎಂಬಾರ್ಕ್ ಸಂಸ್ಥೆಯ ಸಂಜಯ್ ಶ್ರೀಧರ್ ಅವರು ಆಯಾ ವಾರ್ಡ್ ಅಲ್ಲಿ ಅಲ್ಲಿನ ಅಲ್ಲಿನ ಮೂಲಭೂತ ಸೌಕರ್ಯಗಳ ಸುಧಾರಣೆಯನ್ನು ನಾಗರೀಕರ ಪಾಲ್ಗೊಳ್ಳುವಿಕೆಯಲ್ಲಿ ಹೇಗೆ ಮಾಡಬಹುದು ಅನ್ನುವುದರ ಬಗ್ಗೆ ಬಿಕ್ಲಿಪ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರ ಮಾತಿನ ಮುಖ್ಯಾಂಶಗಳು:

1. ಯಾವುದೇ ನಗರಕ್ಕೆ ಸಂಬಂಧಿಸಿದ ಯೋಜನೆಗಳ ವಿನ್ಯಾಸ ಯಾವತ್ತು ಜನರ
ಅನುಕೂಲ ತಲೆಯಲ್ಲಿರಿಸಿಕೊಂಡು ರೂಪಿಸಬೇಕೇ ಹೊರತು ಅಧಿಕಾರಿಗಳ ಇಲ್ಲವೇ ಹಣದ ಲೆಕ್ಕಾಚಾರದಲ್ಲಲ್ಲ.

2. ವಿದೇಶದಲ್ಲಿನ ಹಲವು ಒಳ್ಳೆಯ ಯೋಜನೆಗಳನ್ನು ಇಲ್ಲಿ ತಂದು ಜಾರಿ ಮಾಡುವಾಗ ಅವು ನಮ್ಮ ಸಂದರ್ಭಕ್ಕೆ, ನಮ್ಮ ಅಗತ್ಯಕ್ಕೆ ತಕ್ಕಂತೆ ಇವೆಯೇ ಅನ್ನುವ ಮುನ್ನೆಚ್ಚರಿಕೆ ವಹಿಸಬೇಕು ಇಲ್ಲದಿದ್ದಲ್ಲಿ ಅವು ಪರಿಹಾರ ಕೊಡುವುದಕ್ಕಿಂತ ಸಮಸ್ಯೆಯನ್ನೇ ಉಲ್ಬಣಗೊಳ್ಳುವಂತೆ ಮಾಡಬಹುದು.

3. ಒಂದು ವಾರ್ಡಿನಲ್ಲಿ ನಡೆಯುವ ಎಲ್ಲ ಯೋಜನೆಗಳನ್ನು ಪ್ರತ್ಯೇಕವಾಗಿ ನೋಡದೇ
ಅವುಗಳನ್ನು ಬೆಸೆಯುವ ಬಗೆಯನ್ನು ಆಲೋಚಿಸಬೇಕು. ಉದಾಹರಣೆಗೆ ವಾರ್ಡಿನ ಎರಡು ಮೂಲೆಯಲ್ಲಿ ಪಾರ್ಕ್ ಕಟ್ಟುವ ಕೆಲಸವಾದರೆ, ಅವುಗಳನ್ನು ಪ್ರತ್ಯೇಕವಾಗಿ ನೋಡದೇ ಒಂದು ಪಾರ್ಕಿನಿಂದ ಇನ್ನೊಂದು ಪಾರ್ಕಿಗೆ ಜನರು ನಡೆದುಕೊಂಡು ಹೋಗಲು ಅನುಕೂಲವಾಗಬೇಕು ಅನ್ನುವ ಆಲೋಚನೆ ಇಟ್ಟುಕೊಂಡು ವಿನ್ಯಾಸ ಮಾಡಬೇಕು. ಒಮ್ಮೆ ಯೋಜನೆಗಳನ್ನು ಬೆಸೆಯುವ ಮನಸ್ಥಿತಿಯಿಂದ ಯೋಜನೆಗಳನ್ನು ರೂಪಿಸಲು ಆರಂಭಿಸಿದರೆ ಆಗ ಅವುಗಳನ್ನು ಜಾರಿಗೆ ತರಲು ಬೇಕಿರುವ ಹಣಕಾಸು ಹೊಂದಿಸುವುದು ಮತ್ತು ಅವುಗಳ ಅನುಷ್ಟಾನದಲ್ಲೂ ಈ ಚಿಂತನೆ ಕಾಣಿಸಲು ಆರಂಭಿಸುತ್ತದೆ ಮತ್ತು ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

4. ಪ್ರತಿ ವಾರ್ಡಿನಲ್ಲಿ 20% ಜಾಗ ಮುಕ್ತ ಸ್ಥಳವಾಗಿರಬೇಕು ಅನ್ನುವ ನಿಯಮವಿದ್ದರೂ ಆ 20% ಜಾಗ ಇಡೀ ವಾರ್ಡಿನ ತುಂಬ ಹಂಚಿದಂತೆ ಹರಡಿಕೊಂಡಿರುತ್ತೆ ಮತ್ತು ಅವುಗಳನ್ನು ಬೆಸೆಯುವ ಸಂಪರ್ಕ ಮಾರ್ಗಗಳೇ ಇರಲ್ಲ. ಪಾದಚಾರಿಗಳು ಸುರಕ್ಷಿತವಾಗಿ ಈ 20% ಜಾಗವನ್ನು ಬಳಸಲಾಗುವಂತೆ ನಾವು
ಅವುಗಳನ್ನು ಬೆಸೆಯುವಂತೆ ನಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

5. ಕೆರೆಗಳು ಒಂದು ವಾರ್ಡಿನ ಜೀವಸೆಲೆಯಿದ್ದಂತೆ. ಬೆಂಗಳೂರಿನ ಕೆರೆಗಳು ಐತಿಹಾಸಿಕವಾಗಿ ಒಂದಕ್ಕೊಂದು ಬೆಸೆದುಕೊಂಡಂತೆ ವಿನ್ಯಾಸಗೊಂಡತವು. ಒಂದು ಚಿಕ್ಕ ಕೆರೆ ತುಂಬಿದರೆ ಅದು ಹರಿದು ಇನ್ನೊಂದು ದೊಡ್ಡ ಕೆರೆಗೆ ಸೇರುವ ರೀತಿಯಲ್ಲಿ ಅವುಗಳನ್ನು ರೂಪಿಸಲಾಗಿತ್ತು. ಆದರೆ ಇಂದು ತಲೆಬುಡವಿಲ್ಲದ ಅಭಿವ್ರದ್ಧಿಯಲ್ಲಿ ಕೆರೆಗಳ ನಡುವಿನ ನೈಸರ್ಗಿಕವಾದ ಈ ಕೊಂಡಿ ಕಳಚಿಹೋಗಿದೆ. ತಕ್ಷಶಿಲಾ ಸಂಸ್ಥೆಯ ಸ್ವತ್ತು ಕೆರೆಗಳು ಹಲವು ವಾರ್ಡ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವುದರಿಂದ ಇಂತಹ ವಿಷಯದಲ್ಲಿ ಹಲವು ವಾರ್ಡಿನ ಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕು.

6. ಕಳೆದ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ 330 ಪಾದಚಾರಿಗಳು ರಸ್ತೆ ದಾಟುವಾಗ
ಸಾವನ್ನಪ್ಪಿದ್ದಾರೆ. ಇದು ನಮ್ಮಲ್ಲಿ ಪಾದಚಾರಿ ಮಾರ್ಗಗಳ ಕೊರತೆಯನ್ನು ಎತ್ತಿ ತೋರುತ್ತಿವೆ. ಇದು ನಗರ ತಲೆ ತಗ್ಗಿಸಬೇಕಾದ ವಿಚಾರವಾಗಿದೆ.

7. ಸಂವಿಧಾನದ 74ನೆ ವಿಧಿಯನ್ವಯ ಒಂದು ವಾರ್ಡಿನಲ್ಲಿ ನಾಗರೀಕ ಸೇವೆ ಕಲ್ಪಿಸುವ ಅಲ್ಲಿನ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತಂದು ಅವರ ನಡುವೆ ಸಮನ್ವಯ ಏರ್ಪಡುವಂತೆ ಮಾಡುವ ಸಂವಿಧಾನಿಕ ಹಕ್ಕು ಜನರಿಗಿದೆ.

8. ನಮ್ಮಲ್ಲಿನ ವಸತಿ ಸೌಲಭ್ಯ ಬಡವರು ಮತ್ತು ಸಿರಿವಂತರನ್ನು ದೂರ ದೂರವಿರಿಸುವ
ರೀತಿಯಲ್ಲಿದೆ. ಸಿರಿವಂತರು ವಾಸಿಸುವ ಸ್ಥಳಕ್ಕೆ ಹತ್ತಿರದಲ್ಲೇ ಬಡವರು ವಾಸಿಸುವ ಹಾಗಿರಬೇಕು. ಅದು ಇಬ್ಬರಿಗೂ ಅನುಕೂಲ ಕಲ್ಪಿಸುವಂತದ್ದು ಮತ್ತು ಅದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ಹತ್ತಿರವಾದದ್ದು.

9. ಬೆಂಗಳೂರಿನ 52% ಜನರು ಬಿ.ಎಮ್.ಟಿ.ಸಿ ಬಳಸುತ್ತಾರೆ. 12% ಜನರು ತಮ್ಮ ಕಾರು ಬಳಸುತ್ತಾರೆ. ಆದರೆ ನಮ್ಮ ಅಭಿವ್ರದ್ಧಿಯ ಗಮನವೆಲ್ಲವೂ ಈ ಕಾರುಗಳಿಗೆ ಹೇಗೆ ಹೆಚ್ಚು ರಸ್ತೆ ಒದಗಿಸುವುದು, ಕಾರುಗಳ ಓಡಾಟಕ್ಕೆ ಟ್ರಾಫಿಕ್ ಕಡಿಮೆ ಮಾಡುವುದು ಹೇಗೆ ಅಂಬುದಕ್ಕೆ ಸೀಮಿತವಾಗಿದೆ. ಇದು ಬದಲಾಗಬೇಕು. ನಮ್ಮ ಗಮನ ಯಾವತ್ತಿಗೂ ಅತಿ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸುವುದು ಹೇಗೆ ಅನ್ನುವುದರತ್ತ ಇರಬೇಕು.

10. ಯಾವುದೇ ಯೋಜನೆ ರೂಪಿಸುವಾಗ ವಾರ್ಡ್ ಮಟ್ಟದಲ್ಲಿ ಅಲ್ಲಿನ ವಸತಿ ಸಂಘಗಳು, ವ್ಯಾಪಾರಿಗಳು ಸೇರಿದಂತೆ ಎಲ್ಲರ ಅನಿಸಿಕೆ ತಿಳಿದು ಅವುಗಳ ಆಧಾರದ ಮೇಲೆ ಯೋಜನೆ ರೂಪಿಸಿದರೆ ಅದು ಹೆಚ್ಚು ಜನಪರವಾಗಿರುತ್ತೆ.

#5 ಬ್ರಾಂಡ್ ಅಂದರೇನು? – ಹರೀಶ್ ಬಿಜೂರು

ಬ್ರಾಂಡ್ ಅಂದರೇನು? ಅದು ಯುವ ಪೀಳಿಗೆಯ ಜನ ನಾಯಕನಾಗುವವನಿಗೆ ಎಷ್ಟು ಮುಖ್ಯ? ಅದನ್ನು ಹೇಗೆ ಕಟ್ಟಿಕೊಳ್ಳಬೇಕು ಅನ್ನುವ ಬಗ್ಗೆ ಬ್ರಾಂಡ್ ಪರಿಣಿತ ಹರೀಶ್ ಬಿಜೂರು ಫೆಬ್ರವರಿ ಒಂದರಂದು ಬಿಕ್ಲಿಪ್ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅವರ ಮಾತಿನ ಸಾರಾಂಶ ಇಂತಿದೆ:

1. ಬ್ರಾಂಡ್ ಅನ್ನುವುದು ಒಂದು ಆಶ್ವಾಸನೆ. ಬೆಂಗಳೂರಿನ ಪಾಲಿಗೆ ಅದು ನೀವೇ !

2. ಬ್ರಾಂಡ್ ಅಂದರೆ ಬರೀ ಹೆಸರು, ಚಿಹ್ನೆ ಅಲ್ಲ. ಬ್ರಾಂಡ್ ಅನ್ನುವುದು ಒಂದು ಗುರುತು, ಒಂದು ಗುಣ, ಒಬ್ಬ ವ್ಯಕ್ತಿಯ ಮನದಲ್ಲಿರುವ ಒಂದು ಶಕ್ತಿಶಾಲಿ ಚಿಂತನೆ.

3. ಭಾರತದ 54% ಜನರು 25ರ ಹರೆಯದ ಕೆಳಗಿನವರು. 72% ಜನರು 35ರ ಹರೆಯದ ಕೆಳಗಿನವರು. ಈ ಜನರಿಗೆ ತಾಳ್ಮೆಯಿಲ್ಲ. ಎಲ್ಲವೂ ತುರ್ತಾಗಿ ಆಗಬೇಕು. ತಾಳೆಯಿಲ್ಲದ ಈ ಪೀಳಿಗೆಗೆ ನೀವು ನಾಯಕರಾಗುವಾಗ ನಿಮ್ಮಲ್ಲೂ ತಾಳ್ಮೆಯಿರಬಾರದು. ಈ ಜನರ ಬೇಡಿಕೆಗೆ ಸ್ಪಂದಿಸುವಂತೆ ನೀವು ತುದಿಗಾಲ ಮೇಲೆ ನಿಂತ ನಾಯಕರಾಗಿರಬೇಕು. ಅದಕ್ಕೆ ತಕ್ಕಂತೆ ನಿಮ್ಮ ಬ್ರಾಂಡ್ ರೂಪಿಸಿಕೊಳ್ಳಬೇಕು. ಆದರೆ ಗಡಿಬಿಡಿಯ ಈ ಬದುಕಿನಲ್ಲಿ ಒಮ್ಮೆ ನಿಂತು ನಿಮ್ಮನ್ನು ನೀವೆ ಆತ್ಮಾವಲೋಕನಕ್ಕೆ ಒಳಪಡಿಸುವ ಯೋಚನೆಯೂ ನಿಮ್ಮಲಿರಲಿ. ನೀವು ರಾಜಕಾರಣಕ್ಕೆ ಬರುತ್ತಿರುವ ಮೂಲ ಉದ್ದೇಶವೇ ಜನರ ಸೇವೆ ಅನ್ನುವುದನ್ನು ಎಂದಿಗೂ ಮರೆಯದಿರಿ.

4. ಇಂದು ಜನರು ನಿಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಅನ್ನುವ ಕಲ್ಪನೆ ನೀವು ನಿಜಕ್ಕೂ ಒಬ್ಬ ವ್ಯಕ್ತಿಯಾಗಿ ಹೇಗಿದ್ದೀರಿ ಅನ್ನುವ ಸತ್ಯಕ್ಕಿಂತ ಮುಖ್ಯವಾಗಿದೆ. ಅದು ನಿಜಕ್ಕೂ ದುಃಖದ ವಿಷಯವೇ ಆದರೂ ಈ ಬದಲಾವಣೆಗೆ ಸ್ಪಂದಿಸಬೇಕಾದದ್ದು ಇಂದಿನ ರಾಜಕಾರಣದ ಅಗತ್ಯವೂ ಹೌದು. ನೀವೊಬ್ಬ ಕೆಲಸ ಮಾಡಿ, ಫಲವನ್ನು ದೇವರ ಲೆಕ್ಕಕ್ಕೆ ಬಿಡುವ ಮನುಷ್ಯನಾದರೆ ಸಾಲಲ್ಲ. ಇಂದು ಕೆಲಸ ಮಾಡಿ, ಆ ಕೆಲಸ ನೀವೇ ಮಾಡಿದ್ದು ಎಂದು ತಿಳಿಸುವ ಮಟ್ಟಿಗಿನ ಜಾಣತನವೂ ನಿಮ್ಮಲಿರಲಿ.

5. ನೀವೊಬ್ಬ ಕೆಲಸಗಾರ, ನೀವೊಬ್ಬ ಮಾತಿಗೆ ತಪ್ಪದ ನಾಯಕ, ನೀವೊಬ್ಬ ಬಡವರ ದುಃಖಕ್ಕೆ ಸ್ಪಂದಿಸುವವ, ನೀವು ನಿಮ್ಮದೇ ಲೋಕದಲ್ಲಿ ವಿಹರಿಸುವ ಜನ, ನೀವು ಜನರ ಜೊತೆ ಬೆರೆಯದವರು, ಹೀಗೆ ನೂರಾರು ಬಗೆಯಲ್ಲಿ ನಿಮ್ಮ ಬಗ್ಗೆ ನಿಮ್ಮ ವಾರ್ಡಿನ ಜನರು ಅಂದುಕೊಳ್ಳಬಹುದು. ಈ ಎಲ್ಲ ಜನರ ಅನಿಸಿಕೆಗಳ ಒಟ್ಟು ಮೊತ್ತವೇ ನಿಮ್ಮ ವಾರ್ಡಿನಲ್ಲಿ ನಿಮ್ಮ ಬ್ರಾಂಡ್ ಆಗಿರುತ್ತೆ. ಅದನ್ನು ಜತನದಿಂದ ಬೆಳೆಸಿಕೊಳ್ಳಿ.

6. ಕೆಲಸ ಮಾಡಿ ಮತ್ತು ಅದನ್ನು ಹೆಮ್ಮೆಯಿಂದ ತೋರಿಸಿಕೊಳ್ಳಿ. ಸಾಮಾಜಿಕ ಸಂಪರ್ಕ ತಾಣಗಳಾದ ಟ್ವಿಟರ್, ಈಮೇಲ್, ಫೇಸ್ ಬುಕ್ ಅನ್ನು ವ್ಯಾಪಕವಾಗಿ ಬಳಸಿ ಜನರೊಂದಿಗೆ ಸಂಪರ್ಕ ಸಾಧಿಸಿ. ತಕ್ಷಶಿಲಾ ಸಂಸ್ಥೆಯ ಸ್ವತ್ತು

#4 ಸಾರ್ವಜನಿಕ ರ್ಸ್ತು – ಖಾಸ್ಗಿ ರ್ಸ್ತು

ಜನಪ್ರತಿನಿಧಿಯಾಗುವವನಿಗೆ ಇರಬೇಕಾದ ಮೊದಲ ತಿಳುವಳಿಕೆ ಜನರಿಗೆ ಬೇಕಾದ ಯಾವ ವಸ್ತು ಯಾವ ಸ್ವರೂಪದ್ದು ಮತ್ತು ಅದನ್ನು ಯಾರು ಕಲ್ಪಿಸಬೇಕು ಅನ್ನುವುದು. ಕಾಸರಿಮೆ(ಎಕನಾಮಿಕ್ಸ್) ಯಲ್ಲಿ ಸಾರ್ವಜನಿಕ ವಸ್ತು ಮತ್ತು ಖಾಸಗಿ ವಸ್ತು (Public Good and Private Good) ಅನ್ನುವ ಎರಡು ವಿಷಯಗಳಿವೆ. ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಸಾರ್ವಜನಿಕರಿಗೆ ಬೇಕಾದ ಸೇವೆ, ಉತ್ಪನ್ನಗಳನ್ನು ಕಲ್ಪಿಸುವಾಗ ಅದನ್ನು ಯಾರು ಮಾಡಬೇಕು ಅನ್ನುವ ಬಗ್ಗೆ ಸರಿಯಾದ ತಿಳುವಳಿಕೆ ನೀಡುತ್ತೆ.

ಸಾರ್ವಜನಿಕ ವಸ್ತು (ಪಬ್ಲಿಕ್ ಗೂಡ್ಸ್): ಯಾವ ವಸ್ತುವನ್ನು ಬಳಸುವುದರಿಂದ ಯಾರನ್ನು ಹೊರತುಪಡಿಸಲಾಗದ ಮತ್ತು ಒಬ್ಬರ ಬಳಕೆಯಿಂದ ಇನ್ನೊಬ್ಬರಿಗೆ ಕೊರತೆಯಾಗದ ಯಾವುದೇ ವಸ್ತುವನ್ನು ಸಾರ್ವಜನಿಕ ವಸ್ತುವೆಂದು ಕರೆಯಬಹುದು. ಉದಾಹರಣೆಗೆ: ಶುದ್ದ ಗಾಳಿ, ಜ್ಞಾನ, ದೇಶದ ರಕ್ಷಣಾ ವ್ಯವಸ್ಥೆ, ಬೀದಿ ದೀಪ ಮುಂತಾದವು. ಈ ಯಾವುದೇ ವಸ್ತುವನ್ನು ಬಳಸುವುದರಿಂದ ಯಾರನ್ನು ಹೊರತು ಪಡಿಸಲಾಗದು ಮತ್ತು ಈ ವಸ್ತುಗಳನ್ನು ಒಬ್ಬರು ಬಳಸಿದಾಗ ಅದು ಇನ್ನೊಬ್ಬರಿಗೆ ಸಿಗದ ಸ್ಥಿತಿಯೂ ಇಲ್ಲ.

ಖಾಸಗಿ ವಸ್ತು (ಪ್ರೈವೇಟ್ ಗೂಡ್ಸ್): ಯಾವ ವಸ್ತುವನ್ನು ಬಳಸುವುದರಿಂದ ಯಾರನ್ನಾದರೂ ಹೊರತು ಪಡಿಸಬಹುದೋ ಮತ್ತು ಯಾವ ವಸ್ತುವಿಗೆ ಪೈಪೋಟಿ ಇದ್ದು ಒಬ್ಬರು ಬಳಸಿದಾಗ ಅದು ಇನ್ನೊಬ್ಬರಿಗೆ ದೊರಕುವುದಿಲ್ಲವೋ ಅಂತಹ ವಸ್ತುವನ್ನು ಖಾಸಗಿ ವಸ್ತುವೆಂದು ಕರೆಯಬಹುದು. ಉದಾಹರಣೆಗೆ: ಒಬ್ಬ ವ್ಯಕ್ತಿ ಕೊಳ್ಳುವ ಕಾರ್ ಇಲ್ಲವೇ ಸೈಟು. ಈ ಕಾರ್ ಇಲ್ಲವೇ ಸೈಟ್ ಅನ್ನು ಕೊಂಡವರು ಮಾತ್ರವೇ ಬಳಸಬಹುದು, ಇತರರು ಬಳಸದಂತೆ ಅದರ ಮಾಲಿಕ ತಡೆಯಬಹುದು. ಹಾಗೆಯೇ ಈ ಕಾರ್ ಇಲ್ಲವೇ ಸೈಟ್ ಅನ್ನು ಒಬ್ಬರು ಕೊಂಡಾಗ ಅದು ಇನ್ನೊಬ್ಬರಿಗೆ ಕೊಳ್ಳಲು ದೊರಕದು.

ಅರೆಖಾಸಗಿ (ಕ್ಲಬ್ ಗೂಡ್ಸ್): ಇನ್ನು ಕೆಲವು ವಸ್ತುಗಳನ್ನು ಬಳಸದಂತೆ ಯಾರನ್ನಾದರೂ ಆಚೆಗಿಡಬಹುದು ಆದ್ರೆ ಒಬ್ಬರು ಬಳಸಿದ್ರೆ ಅದರಿಂದ ಇನ್ನೊಬ್ಬರ ಬಳಕೆಗೆ ತೊಂದರೆಯೇನು ಆಗಲ್ಲ. ಅಂತಹ ವಸ್ತುಗಳನ್ನು ಕ್ಲಬ್ ಗೂಡ್ ಇಲ್ಲವೇ ಅರೆಖಾಸಗಿ ವಸ್ತುವೆನ್ನಬಹುದು. ಉದಾಹರಣೆಗೆ: ಸಿನೆಮಾ ಹಾಲ್, ಖಾಸಗಿ ಪಾರ್ಕ್. ಇವುಗಳನ್ನು ಬಳಸುವ ವಿಷಯದಲ್ಲಿ ಯಾರನ್ನಾದರೂ ಆಚೆಗಿಡಬಹುದು (ಉದಾ:ಫೀಸ್ ಕೊಟ್ಟವನಿಗೆ ಮಾತ್ರ ಪ್ರವೇಶ ಅಂತ ಮಾಡಬಹುದು.) ಆದರೆ ಒಬ್ಬರು ಪಾರ್ಕ್ ಬಳಸಿದರೆ ಅದರಿಂದ ಇನ್ನೊಬ್ಬರಿಗೆ ಬಳಸಲಾಗದು ಅನ್ನುವಂತೇನಿಲ್ಲ.

ಎಲ್ಲರ ವಸ್ತು (ಕಾಮನ್ ಗೂಡ್ಸ್): ಇನ್ನು ಕೆಲವು ವಸ್ತುಗಳನ್ನು ಬಳಸದಂತೆ ಯಾರನ್ನು ತಡೆಯಲಾಗದು, ಆದ್ರೆ ಅದನ್ನು ಪಡೆಯಲು ಪೈಪೋಟಿ ಇರುತ್ತೆ ಒಬ್ಬರು ಬಳಸುವುದರಿಂದ ಅದು ಇನ್ನೊಬ್ಬರಿಗೆ ದೊರಕುವುದಿಲ್ಲ. ಅಂತಹ ವಸ್ತುವನ್ನು ಕಾಮನ್ ಗೂಡ್ಸ್ ಎಂದು ಕರೆಯುತ್ತಾರೆ. ಉದಾಹರಣೆಗೆ: ಊರ ಹೊರಗಿನ ಹುಲ್ಲಿನ ಬಯಲು. ಇದನ್ನು ಬಳಸಲು ಯಾರಿಗೂ ತಡೆಯಿಲ್ಲ, ಆದರೆ ಅಲ್ಲಿ  ಹತ್ತು ಮೀಟರ್ ಉದ್ದದ ಹುಲ್ಲುಗಾವಲು ಇದ್ದರೆ ಅದರಲ್ಲಿ ಯಾರೋ ಒಬ್ಬರು ಒಂದು ಮೀಟರ್ ಹುಲ್ಲು ತಮ್ಮ ದನಕ್ಕೆ ತಿನ್ನಿಸಿದರೆ ಆ ಒಂದು ಮೀಟರ್ ಹುಲ್ಲುಗಾವಲು ಇನ್ನೊಬ್ಬರಿಗೆ ದೊರಕದು. ಇನ್ನೊಂದು ಉದಾಹರಣೆ: ಕೆರೆಯಲ್ಲಿನ ಮೀನು. ಬಳಸಲು ಯಾರಿಗೂ ತಡೆಯಿಲ್ಲ, ಆದರೆ ಒಬ್ಬರಿಗೆ ಹತ್ತು ಮೀನು ಸಿಕ್ಕರೆ, ಅದೇ ಹತ್ತು ಮೀನು ಇನ್ನೊಬ್ಬರಿಗೆ ಸಿಗದು. ಅಲ್ಲಿಗೆ ಆ ಹತ್ತು ಮೀನಿಗಾಗಿ ಪೈಪೋಟಿ ಇದೆ ಅನ್ನಬಹುದು.

ಈ ನಾಲ್ಕರ ತಿಳುವಳಿಕೆ ಜನಪ್ರತಿನಿಧಿಗಳಿಗೆ ಯಾಕಿರಬೇಕು? ಅನ್ನುವ ಪ್ರಶ್ನೆಗೆ ಉತ್ತರ ಜನರಿಗೆ ಬೇಕಿರುವ ಯಾವುದೇ ವಸ್ತುವನ್ನು ಈ ನಾಲ್ಕರಲ್ಲಿ ವಿಂಗಡಿಸಬಹುದು. ಇದರಲ್ಲಿ ಖಾಸಗಿ ವಸ್ತುಗಳಾದ ಕಾರು, ಟಿವಿಯನ್ನು ಕೊಡುವುದು ಸರ್ಕಾರದ ಕೆಲಸವಲ್ಲ. ಸಾರ್ವಜನಿಕ ವಸ್ತುಗಳಾದ ರಕ್ಷಣೆ, ಕಾನೂನು ಸುವ್ಯವಸ್ಥೆ, ಶುದ್ದ ಗಾಳಿಯಂತಹದ್ದನ್ನು ಕಲ್ಪಿಸುವುದು ಸರ್ಕಾರದ ಆದ್ಯತೆ. ಇನ್ನು ಕೆಲ ವಿಷಯದಲ್ಲಿ ಸರ್ಕಾರ ಕಾಮನ್ ಗೂಡ್ಸ್ ಅನ್ನು ಕ್ಲಬ್ ಗೂಡ್ಸ್ ಆಗಿ ಪರಿವರ್ತಿಸಬಹುದು. ಉದಾಹರಣೆಗೆ: ಕೆರೆಯಲ್ಲಿನ ಮೀನನ್ನು ಕಾಮನ್ ಗೂಡ್ ಅನ್ನಬಹುದು. ಯಾಕೆಂದರೆ ಅದನ್ನು ಬಳಸಲು ಯಾರಿಗೂ ಯಾವುದೇ ತಡೆಯಿಲ್ಲ ಆದರೆ ಒಬ್ಬರ ಬಳಕೆಯಿಂದ ಅದೇ ವಸ್ತು ಇನ್ನೊಬ್ಬರಿಗೆ ಸಿಗದಿರಬಹುದು. ಆದರೆ ಯಾರೂ ಬೇಕಾದರೂ ಬಳಸಬಹುದು ಅಂತಾದಾಗ ಎಲ್ಲರೂ ತಮ್ಮ ಅನುಕೂಲವಷ್ಟೇ ನೋಡಿ ಬಳಸುತ್ತಾ ಹೋದರೆ ಕೆರೆಯಲ್ಲಿನ ಮೀನೆಲ್ಲ ಖಾಲಿಯಾಗಿ ಕೆರೆ ನಾಶವಾಗಬಹುದು. ಇದನ್ನು ಇಂಗ್ಲಿಷಿನಲ್ಲಿ ಟ್ರಾಜೆಡಿ ಆಫ್ ಕಾಮನ್ಸ್ ಎಂದು ಕರೆಯುತ್ತಾರೆ. (ಯಾರಿಗೂ ಜವಾಬ್ದಾರಿಯಿಲ್ಲದ ವಸ್ತುವೊಂದು ಎಲ್ಲರ ದುರಾಶೆಗೆ ಸಿಲುಕಿ ನಶಿಸಿ ಹೋಗುವುದು). ಆಗ ಸರ್ಕಾರ ಆ ಕೆರೆಗೆ ಬೇಲಿ ಹಾಕಿ ಆದರೆ ಒಬ್ಬರ ಬಳಕೆಯಿಂದ ಅದೇ ವಸ್ತು ಇನ್ನೊಬ್ಬರಿಗೆ ಸಿಗದಿರಬಹುದು. ಆದರೆ ಯಾರೂ ಬೇಕಾದರೂ ಬಳಸಬಹುದು ಅಂತಾದಾಗ ಎಲ್ಲರೂ ತಮ್ಮ ಅನುಕೂಲವಷ್ಟೇ ನೋಡಿ ಬಳಸುತ್ತಾ ಹೋದರೆ ಕೆರೆಯಲ್ಲಿನ ಮೀನೆಲ್ಲ ಖಾಲಿಯಾಗಿ ಕೆರೆ ನಾಶವಾಗಬಹುದು. ಇದನ್ನು ಇಂಗ್ಲಿಷಿನಲ್ಲಿ ಟ್ರಾಜೆಡಿ ಆಫ್ ಕಾಮನ್ಸ್ ಎಂದು ಕರೆಯುತ್ತಾರೆ. (ಯಾರಿಗೂ ಜವಾಬ್ದಾರಿಯಿಲ್ಲದ ವಸ್ತುವೊಂದು ಎಲ್ಲರ ದುರಾಶೆಗೆ ಸಿಲುಕಿ ನಶಿಸಿ ಹೋಗುವುದು). ಆಗ ಸರ್ಕಾರ ಆ ಕೆರೆಗೆ ಬೇಲಿ ಹಾಕಿ .

#3 ಅಗತ್ಯಗಳ ತಿಳಿಯುವಿಕೆ

ಯಾವುದೇ ಜನನಾಯಕನಿಗಿರುವ ಅತಿ ದೊಡ್ಡ ಸವಾಲು ಜನರ ಅಗತ್ಯಗಳೇನು ಅನ್ನುವುದನ್ನು ತಿಳಿಯುವುದು. ಸರ್ಕಾರದ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳು ಯಾವತ್ತೂ ಸೀಮಿತವಾಗಿರುವಂತದ್ದು, ಹೀಗಾಗಿ ಯಾವುದೇ ಒಂದು ಸಮಸ್ಯೆಯತ್ತ ಜನಪ್ರತಿನಿಧಿ ತನ್ನ ಗಮನ ಹರಿಸಬೇಕು ಅಂದರೆ ಯಾವ ಆಧಾರದ ಮೇಲೆ ಅದನ್ನು ನಿರ್ಧರಿಸಬೇಕು ಅನ್ನುವುದು ಮುಖ್ಯವಾಗುತ್ತೆ. ಈ ಅಗತ್ಯಗಳ ತಿಳಿಯುವಿಕೆಗೆ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು: ಅನುಭವಿಸಿದ ಕತೆ/ಉದಾಹರಣೆ (anecdotes), ಸಮೀಕ್ಷೆ (survey), ಅಳೆಯುವಿಕೆ (Measurement), ಅಂದಾಜು (Estimates) ಮತ್ತು ಪರಿಣಿತರ ಮಾತು (Experts). ಈ ವಿಧಾನಗಳಲ್ಲಿ ಒಂದು ಇಲ್ಲವೇ ಒಂದಕ್ಕಿಂತ ಹೆಚ್ಚು ವಿಧಾನ ಬಳಸಿ ಯಾವುದೇ ಸಮಸ್ಯೆಯ ಆಳ, ಅಗಲ, ಆದ್ಯತೆಯನ್ನು ತಿಳಿಯುವ ಕೆಲಸ ಒಬ್ಬ ಜನನಾಯಕ ಮಾಡಬಹುದು. ಮೇಲೆ ತಿಳಿಸಿದ ಪ್ರತಿ ವಿಧಾನದಲ್ಲೂ ಕೊರತೆಗಳು ಇಲ್ಲದಿಲ್ಲ. ಆದರೆ ಹಲವು ವಿಧಾನಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಹೋಲಿಸಿ ಕೊನೆಯಲ್ಲಿ ತನ್ನದೇ ಆದ ನಿರ್ಣಯ ಕೈಗೊಳ್ಳುವ ಸ್ವಂತ ಬುದ್ದಿ ಜನನಾಯಕನಾದವನಿಗೆ ಇರಬೇಕು,  ಸಾರ್ವಜನಿಕ ಹಿತಾಸಕ್ತಿಯ ಮೇಲೆ ಖಾಸಗಿ ಹಿತಾಸಕ್ತಿಯ ಮೇಲುಗೈಯಾಗುವ, ಜನರಲ್ಲಿ ಜಾಗ್ರತಿ ಇಲ್ಲದ, ಸಮಸ್ಯೆಯಲ್ಲಿ ಪರಿಣಿತರನ್ನೇ ಪರಿಹಾರದಲ್ಲೂ ಪರಿಣಿತರು ಅಂದು ತಿಳಿಯುವ ಇಂದಿನ ದಿನದಲ್ಲಿ ಯಾರ ಮಾತು ಕೇಳಬೇಕು, ಯಾರದ್ದು ಬಿಡಬೇಕು ಅನ್ನುವ ನಿರ್ಣಯ ಕೈಗೊಳ್ಳುವುದು ಜನನಾಯಕನಿಗಿರಬೇಕಾದ ನಾಯಕತ್ವದ ಗುಣವೆಂದರೆ ತಪ್ಪಾಗದು.

ಸಾಮಾನ್ಯವಾಗಿ ಜನಪ್ರತಿನಿಧಿಗಳು ಜನರ ಬೇಕು, ಬೇಡ ಈಡೇರಿಸುವುದೇ ತಮ್ಮ ಹೊಣೆಯೆಂದುಕೊಂಡಿರುತ್ತಾರೆ. ಆದರೆ ಈ ಬೇಕು, ಬೇಡಗಳ ಜೊತೆ ನಿಜಕ್ಕೂ ಅದು ಸರಿಯೇ, ಅದರ ಅಗತ್ಯವಿದೆಯೇ? ಅನ್ನುವ ವಿಶ್ಲೇಷಣೆಯನ್ನು ಸೇರಿಸಿ ಜನರ ಅಗತ್ಯಗಳನ್ನು ತಿಳಿಯುವ ಕೆಲಸವಾಗಬೇಕು. ಆದ್ಯತೆಗಳನ್ನು ಅರಿಯಲು ಈ ಚಿತ್ರ ಸಹಾಯ ಮಾಡುತ್ತೆ.

Kannada Chart 1 Kannada Chart 2Kannada Chart 3ನಿಮ್ಮ ವಾರ್ಡಿನಲ್ಲಿ ಯಾವುದೋ ಒಂದು ಸಮಸ್ಯೆಯನ್ನು ಬಗೆಹರಿಸುವ ಮುನ್ನ ಆ ಸಮಸ್ಯೆ ಇಂದು ಯಾವ ಸ್ವರೂಪದಲ್ಲಿದೆ, ಬದಲಾವಣೆ ತಲುಪಬೇಕಾದ ಸ್ಥಿತಿ ಏನು? ಮತ್ತು ಇವೆರಡರ ನಡುವಿರುವ ಕೊರತೆಯೇನು ಅನ್ನುವುದು ಅರ್ಥವಾಗಬೇಕು. ಕೊರತಗಳನ್ನು ಅರಿಯುವಾಗ ನೀವು ನೆನಪಿಡಬೇಕಾದ ಮೂರು ಪದಗಳು 1> ಮುಂದಾಗಬಹುದಾದ ಖರ್ಚು (outlay) 2> ಕಣ್ಣಿಗೆ ಕಾಣುವ ಫಲಿತಾಂಶ/ಬದಲಾವಣೆ (outputs) ಮತ್ತು 3> ಉದ್ದೇಶ, ಸಾರ್ಥಕತೆ (outcome)

ಉದಾಹರಣೆಗೆ ನಿಮ್ಮ ವಾರ್ಡಿನಲ್ಲೊಂದು ಸ್ಲಂ ಮಕ್ಕಳಿಗೆ ಸರಿಯಾದ ಹೊಸ ಶಾಲೆ ಕಟ್ಟದ ಕಟ್ಟಬೇಕು ಅನ್ನುವುದು ನಿಮ್ಮ ಉದ್ದೇಶವಾಗಿದ್ದಲ್ಲಿ ಅದಕ್ಕೆಂದು ಬಿ.ಬಿ.ಎಮ್.ಪಿ ವಾರ್ಡ್ ಬಜೆಟಿನಲ್ಲಿ ಎತ್ತಿಟ್ಟ ಹಣ ಮುಂದಾಗಬಹುದಾದ ಖರ್ಚು ಅನ್ನಬಹುದು. ಒಂದೊಳ್ಳೆ ಶಾಲೆಯ  ಕಟ್ಟದ ಕಟ್ಟಿದ್ದನ್ನು ಕಣ್ಣಿಗೆ ಕಾಣುವ ಬದಲಾವಣೆ ಅನ್ನಬಹುದು, ಆದರೆ ಆ ಹೊಸ ಕಟ್ಟಡದಲ್ಲಿ ಮಕ್ಕಳು ಬಂದು ಕಲಿತು ವಿದ್ಯಾವಂತರಾಗುವುದು ಇದರ ಉದ್ದೇಶ ಇಲ್ಲವೇ ಸಾರ್ಥಕತೆ ಎನ್ನಬಹುದು.

ನಿಮ್ಮ ಉದ್ದೇಶ,ಗುರಿ ತಲುಪುವಲ್ಲಿ ನೀವು ಹಲವು ಕಾರಣಗಳಿಂದ ಎಡವಬಹುದು. ಆ ಕಾರಣಗಳು ಇವುಗಳಲ್ಲೊಂದಾಗಿರಬಹುದು. ೧> ಸರಿಯಾದ ನೀತಿ ನಿಯಮಗಳಿಲ್ಲದಿರುವುದು. ೨> ಆ ಕೆಲಸಕ್ಕೆ ಬೇಕಿರುವ ನೈಪುಣ್ಯತೆ ನಿಮ್ಮಲ್ಲಿಲ್ಲದಿರುವುದು. ೩> ಸಂಪನ್ಮೂಲದ ಕೊರತೆ ೪> ಅರಿವಿನ ಕೊರತೆ ೫> ಗಮನದ ಕೊರತೆ ೬> ತಂತ್ರಜ್ಞಾನದ ಬಳಕೆಯಲ್ಲಿನ ಕೊರತೆ. ಈ ಎಲ್ಲ ಕೊರತೆಗಳು ಒಂದಕ್ಕೊಂದು ನೆಂಟು ಹೊಂದಿವೆ. ಈ ಕೊರತೆಗಳೆಲ್ಲದರತ್ತ ನೀವು ಗಮನ ಹರಿಸಿದಲ್ಲಿ ಸಮಸ್ಯೆಯನ್ನು ಇನ್ನಷ್ಟು ಸರಿಯಾಗಿ ಬಗೆಹರಿಸಲು ಸಾಧ್ಯವಾಗಬಹುದು. ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಯಾವತ್ತೂ ಚಿಕ್ಕ ಚಿಕ್ಕ ಹೆಜ್ಜೆಗಳಲ್ಲೇ ಬರುವುದು, ಹೀಗಾಗಿ ರಾತ್ರೋರಾತ್ರಿ ಬದಲಾವಣೆ ತರುವೆ ಎಂದು ಹೊರಡುವುದು ಹೆಚ್ಚಿನ ಬಾರಿ ಅಂದುಕೊಳ್ಳದ ಇನ್ನೊಂದು ಸಮಸ್ಯೆಯ ಹುಟ್ಟಿಗೆ ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಪ್ರಣಾಳಿಕೆಯಲ್ಲಿ ಏನು ಭರವಸೆ ಕೊಡುತ್ತೀರಿ ಅನ್ನುವುದರ ಬಗ್ಗೆ ಎಚ್ಚರವಿರಲಿ.

#2 ಸಾರ್ವಜನಿಕ ಹಣಕಾಸು ವ್ಯವಸ್ಥೆ

ಸಾರ್ವಜನಿಕ ಹಣಕಾಸು ವ್ಯವಸ್ಥೆ ಅನ್ನುವುದು ಸಾರ್ವಜನಿಕರಿಗೆ ಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಪೂರೈಸಲು ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಇರುವ ಎಲ್ಲ ತೊಡಕುಗಳ ಮಧ್ಯ ಹೇಗೆ ಹೊಂದಿಸಬೇಕು ಅನ್ನುವ ವಿದ್ಯೆಯಾಗಿದೆ.ಆದರೆ ಈ ವಿಷಯ ಇಂದಿರುವಂತೆ ಕೇವಲ ಒಂದು ಸರ್ಕಾರಿ ವ್ಯವಸ್ಥೆ ಎಷ್ಟು ಹಣ ಖರ್ಚು ಮಾಡಲಿದೆ, ಮಾಡಿದೆ ಅನ್ನುವ ಲೆಕ್ಕಾಚಾರಕ್ಕೆ ಸೀಮಿತವಾಗದೇ ಆ ಖರ್ಚಿನಿಂದ ಜನರಿಗೆ ಅನುಕೂಲವಾಗುವಂತಹ ಫಲಿತಾಂಶ ಏನು ಬಂದಿದೆ ಅನ್ನುವುದನ್ನು ಅಳೆಯುವ ಕಡೆ ಹೊರಳಬೇಕಿದೆ.

1960ರ ದಶಕದಲ್ಲಿ ಸರ್ಕಾರಕ್ಕೇ ಎಲ್ಲ ಸಾಧ್ಯ ಅನ್ನುವ ಮನಸ್ಥಿತಿಯಿತ್ತು. ಆದರೆ ದಿನಗಳೆದಂತೆ ಒಂದಿಷ್ಟು ಕಡೆ ಸರ್ಕಾರಕ್ಕೆ, ಒಂದಿಷ್ಟು ಕಡೆ ಮಾರುಕಟ್ಟೆಗೆ ಇನ್ನೊಂದಿಷ್ಟು ಕಡೆ ಲಾಭರಹಿತ ಸಂಸ್ಥೆ ಹೀಗೆ ನಮ್ಮ ವ್ಯವಸ್ಥೆಯಲ್ಲಿ ಫಲಿತಾಂಶ ಆಧಾರಿತ ಬದಲಾವಣೆ ತಂದುಕೊಳ್ಳಲು ಯಾರಿಂದಾಗುವುದೋ ಅದೆಲ್ಲವನ್ನು ಬಳಸಬೇಕು, ಸರ್ಕಾರಕ್ಕೆ ತನ್ನದೇ ಆದ ಮಿತಿಯಿದೆ ಅನ್ನುವ ತಿಳುವಳಿಕೆ ಇತ್ತೀಚಿನ ದಶಕಗಳಲ್ಲಿ ಹೆಚ್ಚಿದೆ.

ಸಾರ್ವಜನಿಕ ಹಣಕಾಸು ವ್ಯವಸ್ಥೆಯ ಅಡಿಪಾಯವೇ ಸರ್ಕಾರ ವಿಧಿಸುವ ತೆರಿಗೆ. ಸರ್ಕಾರವೊಂದಕ್ಕೆ ತೆರಿಗೆ ವಿಧಿಸುವ ಹಕ್ಕಿದೆ. ಹಾಗಿದ್ದರೆ ತೆರಿಗೆಯೆಂದರೇನು? ಸರ್ಕಾರಿ ವ್ಯವಸ್ಥೆ ತನ್ನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರಿಂದ ಕಡ್ಡಾಯವಾಗಿ ವಸೂಲು ಮಾಡುವ ನಿಗದಿತ ಪ್ರಮಾಣದ ಹಣವೆನ್ನಬಹುದು. ಭಾರತದ 120 ಕೋಟಿ ಜನರಲ್ಲಿ ಕೇವಲ 3% ಜನರು ಮಾತ್ರವೇ ತೆರಿಗೆ ವ್ಯಾಪ್ತಿಯಲ್ಲಿದ್ದಾರೆ. ಹಾಗಿದ್ದರೆ ಭಾರತ ಒಂದು ಕಡಿಮೆ ತೆರಿಗೆಯ ಒಕ್ಕೂಟವೇ? ಅನ್ನುವ ಪ್ರಶ್ನೆಗೆ ಉತ್ತರ: ಇಲ್ಲ ಅನ್ನುವುದಾಗಿದೆ. ಯಾಕೆಂದರೆ ಸರ್ಕಾರ ಕಲ್ಪಿಸಬೇಕಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಇಂತಹ ಹಲವಾರು ಸೌಕರ್ಯಗಳು ಸರಿಯಾಗಿ ಪೂರೈಸಲಾಗದ ಸ್ಥಿತಿಯಲ್ಲಿ ಜನರು ಇವನ್ನು ಖಾಸಗಿ ಸಂಸ್ಥೆಗಳಿಂದ ಹಣ ತೆತ್ತು ಕೊಳ್ಳುತ್ತಿದ್ದಾರೆ. ಇದೊಂದು ನೇರವಾದ ತೆರಿಗೆಯಾಗಿಲ್ಲದೇ ಇದ್ದರೂ ಜನರು ತಮ್ಮ ಉಳಿತಾಯದ ಹಣವನ್ನೇ ಈ ಸೇವೆ ಕೊಳ್ಳಲು ಖರ್ಚು ಮಾಡುತ್ತಿರುವುದರಿಂದ ಹಾಗೇ ತೆರುತ್ತಿರುವ ಹಣವನ್ನೂ ವಾರೆ(indirect) ತೆರಿಗೆಯೆಂದೇ ನೋಡಬೇಕಿದೆ. ಹಾಗೇ ನೋಡಿದಾಗ ಭಾರತ ಒಕ್ಕೂಟ ತನ್ನ ಜನರ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ನಾಡು ಎಂದು ಕರೆಯಬಹುದು. ಹೀಗಾಗಿ ಸರ್ಕಾರ ಮಾಡುವ ಖರ್ಚನ್ನು ಆ ಖರ್ಚು ಎಷ್ಟರ ಮಟ್ಟಿಗೆ ಜನರಿಗೆ ಬೇಕಾದ ಅನುಕೂಲ ಕಟ್ಟಿಕೊಡುತ್ತಿದೆ ಅನ್ನುವ ನೆಲೆಯಲ್ಲಿ ಅಳೆಯಬೇಕಿದೆಯೇ ಹೊರತು ಇಂದಿರುವಂತೆ ಎಷ್ಟು ಖರ್ಚು ಮಾಡಿದೆ ಅನ್ನುವ ಹೆಗ್ಗಳಿಕೆಯ ಮೇಲಲ್ಲ.

ಉಚಿತ ನೀರು, ಕರೆಂಟ್ ಕೊಡುತ್ತೇನೆ ಅನ್ನುವುದು ಬಡವರ ಪರ ಎಂದು ಕಾಣಿಸಿಕೊಳ್ಳಬಹುದು. ಆದರೆ ಬಡತನದ ಹೆಸರಿನಲ್ಲಿ ಜಾರಿಗೆ ಬರುವ ಇಂತಹ ಹೆಚ್ಚಿನ ಯೋಜನೆಗಳು ಬಡ ಯೋಜನೆಗಳೇ ಅನ್ನಬಹುದು. ಉಚಿತ ನೀರು ಮನೆಮನೆಗೆ ಕೊಡುವ ನಿರ್ಧಾರ ಒಂದು ಪಕ್ಷ ಕೈಗೊಂಡರೆ ಅದಕ್ಕೆ ಬೇಕಿರುವ ಸಂಪನ್ಮೂಲ ಹೊಂದಿಸಲು ಇನ್ನಾರದೋ ತಲೆಯ ಮೇಲೆ ಆ ಖರ್ಚನ್ನು ಹಾಕಬೇಕಲ್ಲವೇ? ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಆ ವೆಚ್ಚ ಹಾಕಿದರೆ ಆ ಉದ್ದಿಮೆಗಳ ಉತ್ಪಾದನೆಯ ವೆಚ್ಚ ಹೆಚ್ಚಿ ಅವು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುವುದು ಕಷ್ಟವಾಗಬಹುದು ಮತ್ತು ಇದರಿಂದಾಗಿ ಅವುಗಳು ಇನ್ನೊಂದು ನಾಡಿಗೆ ವಲಸೆ ಹೋಗಬಹುದು. ಹಾಗಿದ್ದರೆ ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ನೀಡಬೇಕೇ ಅಂದರೆ ಅದಕ್ಕೆ ಉತ್ತರ ಇಲ್ಲ ಅನ್ನುವುದಾಗಿದೆ. ಸರಿಯಾದ ಒಪ್ಪಂದಗಳು, ಸೋರಿಕೆ ತಡೆಗಟ್ಟುವುದು, ಯಾವುದೇ ಒಂದು ಸಂಸ್ಥೆಯ ಏಕಸ್ವಾಮ್ಯತೆ ಉಂಟಾಗದಂತೆ ನೋಡಿಕೊಳ್ಳುವುದು, ಸರಿಯಾದ ನಿರ್ವಹಣೆ, ಭ್ರಷ್ಟಾಚಾರಕ್ಕೆ ತಡೆಯುಂಟು ಮಾಡುವಂತಹ ಕ್ರಮಗಳ ಮೂಲಕ ಸರ್ಕಾರ ಈ ಸೇವೆಗಳನ್ನು ಸರಿಯಾದ ದರದಲ್ಲಿ ಎಲ್ಲರಿಗೂ ದೊರಕುವಂತೆ ಮಾಡಬಹುದು.

ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು,ಆಲ್ಲಿರುವ ಅಪಾರ ಮಾಹಿತಿಯನ್ನು ವಿಶ್ಲೇಷಿಸಿ ಸರಿಯಾದ ನಿರ್ವಹಣೆಗೆ ಏನು ಪಾಠ ಕಲಿಯಬಹುದು ಎಂದು ಕಲಿತುಕೊಳ್ಳುವುದು, ಸರಿಯಾದ ಪ್ರಶ್ನೆ ಕೇಳಿ ಕುಂದು ಕೊರತೆಗಳನ್ನು ಅರ್ಥ ಮಾಡಿಕೊಂಡು ಯೋಜನೆಗಳನ್ನು ರೂಪಿಸುವುದು ಸಾರ್ವಜನಿಕ ಜೀವನಕ್ಕೆ ಬರುವ ಪ್ರತಿಯೊಬ್ಬ ನಾಗರೀಕನು ಮಾಡಬೇಕಾದ ಕರ್ತವ್ಯವಾಗಿದೆ. ಮಾಹಿತಿಯನ್ನು ಅರ್ಥ ಮಾಡಿಕೊಂಡು ಸರಿಯಾದ ಪ್ರಶ್ನೆ ಕೇಳುವಾಗ ಒಬ್ಬ ಬುದ್ದಿವಂತ ಗ್ರಾಹಕನಂತೆ ವರ್ತಿಸಬೇಕು.

#1 Kannada notes

ನಗರಗಳೆಂದರೇನು? ಜನಸಾಗರ, ಒಳ್ಳೆಯ ಮೂಲಭೂತ ಸೌಕರ್ಯ, ಹಲವಾರು ಧರ್ಮ, ಸಂಸ್ಕೃತಿಗಳ ನೆಲೆ ಹೀಗೆ  ಕ್ಲಾಸ್ ರೂಮ್ ಅಲ್ಲಿ ಹೇಳಿ ಕೊಡುವಾಗ ಹಲವಾರು ರೀತಿಯಲ್ಲಿ ನಗರಗಳ ಬಗ್ಗೆ ಬರೆಯಬಹುದು. ಇವೆಲ್ಲ ವಿವರಣೆಗಳು ನಿಜವೇ ಆದರೆ ಅಪೂರ್ಣ. ಒಂದು ನಗರವೆಂದರೆ ವೈವಿಧ್ಯತೆಯಿಂದ ಕೂಡಿದ ಜನಸಂಖ್ಯೆ, ಬಗೆ ಬಗೆಯ ವಿನ್ಯಾಸದ ಕಟ್ಟಡಗಳು, ಉದ್ದಿಮೆಗಳು ಮತ್ತು ಅವು ಹುಟ್ಟು ಹಾಕುವ ಹಲ ಬಗೆಯ ಕೆಲಸಗಳು, ಇತಿಹಾಸ, ಸಂಪತ್ತು, ಮೂಲಭೂತ ಸೌಕರ್ಯ ಹೀಗೆ ಅದು ಹಲವು ಗುಣಲಕ್ಷಣಗಳು ಹದವಾಗಿ ಬೆರೆತ ಬೆರಗು. ಇತಿಹಾಸದಲ್ಲಿ ಭಾರತದಲ್ಲಿ ಸರಿಯಾಗಿ ಯೋಜಿಸಲ್ಪಟ್ಟ ಹಲವು ಸುಂದರ ನಗರಗಳಿದ್ದವು. ದೋಲವೀರ ಅನ್ನುವ ಹರಪ್ಪನ ಕಾಲದ ನಗರ ಇದಕ್ಕೊಂದು ಉದಾಹರಣೆ.

ನಗರವೊಂದು ಮೂಲಭೂತ ಸೌಕರ್ಯದ ಜೊತೆಯಲ್ಲಿ ಒಂದು ಮನಸ್ಥಿತಿಯನ್ನು ಎತ್ತಿ ತೋರುವಂತದ್ದು. ಹಲ ಸಂಸ್ಕೃತಿಗಳ ಬಗ್ಗೆ ಸಹಿಷ್ಣುತೆ, ವೈಯಕ್ತಿಕವಾದ, ಸಹನೆ-ಅಸಹನೆ, ಒಂದು ಬಗೆಯ ಶಿಸ್ತು, ಹೀಗೆ ಬಗೆಯ ನಂಬಿಕೆಗಳೆಲ್ಲವೂ ಬೆಸೆದ ಮನಸ್ಥಿತಿ ನಗರವೊಂದರಲ್ಲಿರುತ್ತೆ.

ನಗರವೊಂದಕ್ಕೆ ಮೂಲಭೂತ ಸೌಲಭ್ಯ ಅನ್ನುವುದು ಬಹಳ ಮುಖ್ಯ. ಅದು ಒಂದು ರೀತಿಯಲ್ಲಿ ದಿನ ನಿತ್ಯದ ಚಟುವಟಿಕೆಗಳು ತಡೆಯಿಲ್ಲದೇ ನಡೆಯಲು ಬೇಕಿರುವ ಹಾರ್ಡ್-ವೇರಿನಂತದ್ದು. ರಸ್ತೆ, ನಡೆದಾಡಲು ದಾರಿ, ಫುಟ್-ಪಾತ್, ಬೀದಿ ದೀಪ, ಕುಡಿಯುವ ನೀರು ಹೀಗೆ ಹಲವು ವಿಷಯಗಳು ಮೂಲಭೂತ ಸೌಕರ್ಯವಾಗಬಹುದು. ಹಾಗಿದ್ದರೆ ನಗರಕ್ಕೂ ಹಳ್ಳಿಗಳಿಗೂ ಏನಿದೆ ಅಂತರ ಅನ್ನುವ ಪ್ರಶ್ನೆಗೆ ಉತ್ತರ ಇಷ್ಟೇ: ಹಳ್ಳಿಗಳು ಎಲ್ಲರಿಗೂ ಎಲ್ಲರೂ ಗೊತ್ತಿರುವಂತಹ ಸಮುದಾಯಗಳಿರುವ ಜಾಗ, ಆದರೆ ನಗರದಲ್ಲಿರುವ ಜನದಟ್ಟಣೆ ಮತ್ತು ವೈವಿಧ್ಯತೆಯಿಂದಾಗಿ ಅದೊಂದು ಅಪರಿಚಿತ ಆದರೆ ಊಹಿಸಿಕೊಂಡ ಸಮುದಾಯವೆನ್ನಬಹುದು. ಹಳ್ಳಿಗಳು ತನ್ನದೇ ಆದ ಕಟ್ಟುಪಾಡಿನಂತೆ ನಡೆಯುತ್ತವೆ, ಅಲ್ಲಿ ಇಂತವರು ಇಂತಹ ಕೆಲಸ ಮಾತ್ರ ಮಾಡಬೇಕು ಅನ್ನುವ ವರ್ಗೀಕರಣವೇನು ಇಲ್ಲ. ಆದರೆ ನಗರವೊಂದರಲ್ಲಿ ಯಾರು ಯಾರಿಗೂ ಪರಿಚಯವಿಲ್ಲದಿರಬಹುದು, ನಗರಗಳು ಕಾನೂನು ತಂದ ಕಟ್ಟುಪಾಡುಗಳನ್ವಯ ನಡೆಯುವಂತದ್ದು. ಪ್ರತಿಯೊಂದು ಕೆಲಸ ನಿರ್ದಿಷ್ಟವಾಗಿ ಇಂತವರೇ ಮಾಡುವುದು ಅನ್ನುವ ವರ್ಗೀಕರಣ ನಗರಗಳಲ್ಲಿದೆ. ನಗರಗಳಲ್ಲಿ ದೊಡ್ಡದು ಅನ್ನಿಸುವ ಸಂಖ್ಯೆಯ ಜನರೂ ಇರುತ್ತಾರೆ.

ನಗರಗಳಲ್ಲಿ ಹೆಚ್ಚಿನ ಅಪರಿಚರೇ ಇರುವಾಗ ಅಲ್ಲಿ ಸಮಾಜದಲ್ಲಿ ಜನರ ನಡುವಿನ ಸಾಮಾಜಿಕ ನಂಬಿಕೆ ಅನ್ನುವುದನ್ನು ಸ್ಥಾಪಿಸಲು ಕಾನೂನು ಸುವ್ಯವಸ್ಥೆವೊಂದರಿಂದಲೇ ಸಾಧ್ಯ. ಊಹಿಸಿಕೊಂಡ ಸಮುದಾಯವಾಗಿರುವ ನಗರಗಳಲ್ಲಿ ಎಲ್ಲ ತರದ ಜನರ ಸುರಕ್ಷೆ ನೋಡಿಕೊಳ್ಳಲು, ಎಲ್ಲ ತರದ ಜನರು ಸಹಬಾಳ್ವೆ ಮಾಡಲು ಒಂದು ಹೊರಗಿನ ಶಕ್ತಿ ಬೇಕು. ಆದ್ದರಿಂದಲೇ ಸರಿಯಾದ ಕಾನೂನು, ನೀತಿ ನಿಯಮಗಳು ಬೇಕೇ ಬೇಕು. ಈ ನಿಯಮಗಳು ಎಲ್ಲರೂ ಒಪ್ಪಿ ನಡೆಯುವಂತೆ ಮಾಡಬೇಕು. ಒಂದು ನಗರದಲ್ಲಿ ಸರಿಯಾದ ನೀತಿ ನಿಯಮ ರೂಪಿಸಲು ಯೋಜನೆ ಬಹಳ ಮುಖ್ಯ. 70ರ ದಶಕದಲ್ಲಿ ಬಹಳ ಯೋಜಿತ ನಗರವೆಂದು ಹೆಸರುವಾಸಿಯಾಗಿದ್ದ ಬೆಂಗಳೂರು 80ರ ಹೊತ್ತಿಗೆ ಪರ್ವಾಗಿಲ್ಲ ಅನ್ನುವ ಮಟ್ಟದ ಯೋಜಿತ ನಗರವಾಯಿತು ಆದರೆ 90ರ ಮತ್ತು 2000ದ ಹೊತ್ತಿಗೆ ಇದೊಂದು ಅಡ್ಡಾದಿಡ್ಡಿ ಕಟ್ಟಲ್ಪಟ್ಟ ನಗರವಾಗಿ ಬದಲಾಗಿದೆ. ಆದರೆ ಇದು ಬದಲಾಗಬೇಕು. ಅದಕ್ಕಾಗಿಯೇ ಎಲ್ಲ ನಾಗರೀಕರಿಗೂ ಕಡ್ಡಾಯವಾದ ತಕ್ಕ ನೀತಿ ನಿಯಮಗಳ ಅಗತ್ಯವಿದೆ. ಮತ್ತದಕ್ಕೆ ಯೋಜನೆ ಇಲ್ಲವೇ ಪ್ಲಾನಿಂಗ್ ಬಹಳ ಅತ್ಯಗತ್ಯವಾಗಿದೆ.

*****

ನಗರವೊಂದಕ್ಕೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಬಹಳ ಬೇಕಾದಂತದ್ದು. ಆರ್ಥಿಕ ಸ್ವಾತಂತ್ರ್ಯವೆಂದರೆ ಒಂದು ನಗರದ ಜನ ಕಾನೂನುಬದ್ಧವಾಗಿ ಯಾವುದೇ ವಸ್ತು ಇಲ್ಲವೇ ಸೇವೆಯನ್ನು ಉತ್ಪಾದಿಸುವ, ಮಾರಾಟ ಮಾಡುವ, ಕೊಂಡುಕೊಳ್ಳುವ, ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ನೇರವಾಗಿ ಪಾಲ್ಗೊಳ್ಳುವ ಅವಕಾಶ ಪಡೆಯುವುದು. ಇದು ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯದಷ್ಟೇ ಮುಖ್ಯ.  ಆರ್ಥಿಕ ಸ್ವಾತಂತ್ರ್ಯವನ್ನು ಕಟ್ಟಿಹಾಕಿ, ಜನರಿಗೆ ವ್ಯಾಪಾರ ವಹಿವಾಟು ಮಾಡಲು ತೊಂದರೆ ಕೊಡುವ ಊರುಗಳು ಎಂದಿಗೂ ಚೆನ್ನಾಗಿ ಬೆಳೆಯಲಾರವು. ಹಳ್ಳಿಗಳಲ್ಲಿರುವ ಉಸಿರುಗಟ್ಟಿಸುವ ಜಾತಿ ಪದ್ದತಿಯಂತಹ ಸಾಮಾಜಿಕ ಅನಿಷ್ಟಗಳ ಸರಪಳಿಯನ್ನು ಮುರಿದು ಹಾಕುವ ಶಕ್ತಿ ನಗರಗಳಿಗಿದೆ. ಆದ್ದರಿಂದಲೇ ಇಲ್ಲಿ ಈ ಮೂರು ಬಗೆಯ ಸ್ವಾತಂತ್ರ್ಯ ಬಹಳ ಮುಖ್ಯ. 

ನಗರಗಳು ಬೆಳಗಾಗುವುದರೊಳಗೆ ಕಣ್ಮರೆಯಾಗಲ್ಲ. ಯಾವುದೇ ನಗರ ಯುದ್ದ, ಅವಘಡ, ಕಾಯಿಲೆ, ನೈಸರ್ಗಿಕ ಸಂಪನ್ಮೂಲ ಬರಿದಾಗುವುದು, ಆರ್ಥಿಕ ಕುಸಿತ, ವಲಸೆ ಮತ್ತು ಜನರ ಅಸಡ್ಡೆಯ ಕಾರಣದಿಂದ ಪತನವಾಗಬಹುದು. ಒಂದು ನಗರ ಚೆನ್ನಾಗಿ ಬೆಳೆದು ನಿಲ್ಲಲು ಹಲವು ಅಂಶಗಳು ಕೂಡಿ ಕೆಲಸ ಮಾಡಬೇಕಾಗುತ್ತೆ. ಯೋಜನೆಗಳನ್ನು ರೂಪಿಸುವುದರಿಂದ ಹಿಡಿದು ಅದನ್ನು ಜಾರಿಗೆ ತರುವುದು, ನಾಗರೀಕರ ಪಾಲ್ಗೊಳ್ಳುವಿಕೆ, ಕಾನೂನು ಸುವ್ಯವಸ್ಥೆ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ – ಹೀಗೆ ಮೇಲೆ ಚರ್ಚಿಸಿದ ಪ್ರತಿಯೊಂದು ಅಂಶವೂ ಒಟ್ಟಾಗಬೇಕು. ನಗರಗಳ ಸಮಸ್ಯೆ ಏರಿರುವ ಜನಸಂಖ್ಯೆಯಲ್ಲ, ಅದು ಕುಸಿದಿರುವ ಆಡಳಿತ ಅನ್ನುವುದನ್ನು ನಾವು ಮನಗಾಣಬೇಕು.