#3 ಅಗತ್ಯಗಳ ತಿಳಿಯುವಿಕೆ

ಯಾವುದೇ ಜನನಾಯಕನಿಗಿರುವ ಅತಿ ದೊಡ್ಡ ಸವಾಲು ಜನರ ಅಗತ್ಯಗಳೇನು ಅನ್ನುವುದನ್ನು ತಿಳಿಯುವುದು. ಸರ್ಕಾರದ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳು ಯಾವತ್ತೂ ಸೀಮಿತವಾಗಿರುವಂತದ್ದು, ಹೀಗಾಗಿ ಯಾವುದೇ ಒಂದು ಸಮಸ್ಯೆಯತ್ತ ಜನಪ್ರತಿನಿಧಿ ತನ್ನ ಗಮನ ಹರಿಸಬೇಕು ಅಂದರೆ ಯಾವ ಆಧಾರದ ಮೇಲೆ ಅದನ್ನು ನಿರ್ಧರಿಸಬೇಕು ಅನ್ನುವುದು ಮುಖ್ಯವಾಗುತ್ತೆ. ಈ ಅಗತ್ಯಗಳ ತಿಳಿಯುವಿಕೆಗೆ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು: ಅನುಭವಿಸಿದ ಕತೆ/ಉದಾಹರಣೆ (anecdotes), ಸಮೀಕ್ಷೆ (survey), ಅಳೆಯುವಿಕೆ (Measurement), ಅಂದಾಜು (Estimates) ಮತ್ತು ಪರಿಣಿತರ ಮಾತು (Experts). ಈ ವಿಧಾನಗಳಲ್ಲಿ ಒಂದು ಇಲ್ಲವೇ ಒಂದಕ್ಕಿಂತ ಹೆಚ್ಚು ವಿಧಾನ ಬಳಸಿ ಯಾವುದೇ ಸಮಸ್ಯೆಯ ಆಳ, ಅಗಲ, ಆದ್ಯತೆಯನ್ನು ತಿಳಿಯುವ ಕೆಲಸ ಒಬ್ಬ ಜನನಾಯಕ ಮಾಡಬಹುದು. ಮೇಲೆ ತಿಳಿಸಿದ ಪ್ರತಿ ವಿಧಾನದಲ್ಲೂ ಕೊರತೆಗಳು ಇಲ್ಲದಿಲ್ಲ. ಆದರೆ ಹಲವು ವಿಧಾನಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಹೋಲಿಸಿ ಕೊನೆಯಲ್ಲಿ ತನ್ನದೇ ಆದ ನಿರ್ಣಯ ಕೈಗೊಳ್ಳುವ ಸ್ವಂತ ಬುದ್ದಿ ಜನನಾಯಕನಾದವನಿಗೆ ಇರಬೇಕು,  ಸಾರ್ವಜನಿಕ ಹಿತಾಸಕ್ತಿಯ ಮೇಲೆ ಖಾಸಗಿ ಹಿತಾಸಕ್ತಿಯ ಮೇಲುಗೈಯಾಗುವ, ಜನರಲ್ಲಿ ಜಾಗ್ರತಿ ಇಲ್ಲದ, ಸಮಸ್ಯೆಯಲ್ಲಿ ಪರಿಣಿತರನ್ನೇ ಪರಿಹಾರದಲ್ಲೂ ಪರಿಣಿತರು ಅಂದು ತಿಳಿಯುವ ಇಂದಿನ ದಿನದಲ್ಲಿ ಯಾರ ಮಾತು ಕೇಳಬೇಕು, ಯಾರದ್ದು ಬಿಡಬೇಕು ಅನ್ನುವ ನಿರ್ಣಯ ಕೈಗೊಳ್ಳುವುದು ಜನನಾಯಕನಿಗಿರಬೇಕಾದ ನಾಯಕತ್ವದ ಗುಣವೆಂದರೆ ತಪ್ಪಾಗದು.

ಸಾಮಾನ್ಯವಾಗಿ ಜನಪ್ರತಿನಿಧಿಗಳು ಜನರ ಬೇಕು, ಬೇಡ ಈಡೇರಿಸುವುದೇ ತಮ್ಮ ಹೊಣೆಯೆಂದುಕೊಂಡಿರುತ್ತಾರೆ. ಆದರೆ ಈ ಬೇಕು, ಬೇಡಗಳ ಜೊತೆ ನಿಜಕ್ಕೂ ಅದು ಸರಿಯೇ, ಅದರ ಅಗತ್ಯವಿದೆಯೇ? ಅನ್ನುವ ವಿಶ್ಲೇಷಣೆಯನ್ನು ಸೇರಿಸಿ ಜನರ ಅಗತ್ಯಗಳನ್ನು ತಿಳಿಯುವ ಕೆಲಸವಾಗಬೇಕು. ಆದ್ಯತೆಗಳನ್ನು ಅರಿಯಲು ಈ ಚಿತ್ರ ಸಹಾಯ ಮಾಡುತ್ತೆ.

Kannada Chart 1 Kannada Chart 2Kannada Chart 3ನಿಮ್ಮ ವಾರ್ಡಿನಲ್ಲಿ ಯಾವುದೋ ಒಂದು ಸಮಸ್ಯೆಯನ್ನು ಬಗೆಹರಿಸುವ ಮುನ್ನ ಆ ಸಮಸ್ಯೆ ಇಂದು ಯಾವ ಸ್ವರೂಪದಲ್ಲಿದೆ, ಬದಲಾವಣೆ ತಲುಪಬೇಕಾದ ಸ್ಥಿತಿ ಏನು? ಮತ್ತು ಇವೆರಡರ ನಡುವಿರುವ ಕೊರತೆಯೇನು ಅನ್ನುವುದು ಅರ್ಥವಾಗಬೇಕು. ಕೊರತಗಳನ್ನು ಅರಿಯುವಾಗ ನೀವು ನೆನಪಿಡಬೇಕಾದ ಮೂರು ಪದಗಳು 1> ಮುಂದಾಗಬಹುದಾದ ಖರ್ಚು (outlay) 2> ಕಣ್ಣಿಗೆ ಕಾಣುವ ಫಲಿತಾಂಶ/ಬದಲಾವಣೆ (outputs) ಮತ್ತು 3> ಉದ್ದೇಶ, ಸಾರ್ಥಕತೆ (outcome)

ಉದಾಹರಣೆಗೆ ನಿಮ್ಮ ವಾರ್ಡಿನಲ್ಲೊಂದು ಸ್ಲಂ ಮಕ್ಕಳಿಗೆ ಸರಿಯಾದ ಹೊಸ ಶಾಲೆ ಕಟ್ಟದ ಕಟ್ಟಬೇಕು ಅನ್ನುವುದು ನಿಮ್ಮ ಉದ್ದೇಶವಾಗಿದ್ದಲ್ಲಿ ಅದಕ್ಕೆಂದು ಬಿ.ಬಿ.ಎಮ್.ಪಿ ವಾರ್ಡ್ ಬಜೆಟಿನಲ್ಲಿ ಎತ್ತಿಟ್ಟ ಹಣ ಮುಂದಾಗಬಹುದಾದ ಖರ್ಚು ಅನ್ನಬಹುದು. ಒಂದೊಳ್ಳೆ ಶಾಲೆಯ  ಕಟ್ಟದ ಕಟ್ಟಿದ್ದನ್ನು ಕಣ್ಣಿಗೆ ಕಾಣುವ ಬದಲಾವಣೆ ಅನ್ನಬಹುದು, ಆದರೆ ಆ ಹೊಸ ಕಟ್ಟಡದಲ್ಲಿ ಮಕ್ಕಳು ಬಂದು ಕಲಿತು ವಿದ್ಯಾವಂತರಾಗುವುದು ಇದರ ಉದ್ದೇಶ ಇಲ್ಲವೇ ಸಾರ್ಥಕತೆ ಎನ್ನಬಹುದು.

ನಿಮ್ಮ ಉದ್ದೇಶ,ಗುರಿ ತಲುಪುವಲ್ಲಿ ನೀವು ಹಲವು ಕಾರಣಗಳಿಂದ ಎಡವಬಹುದು. ಆ ಕಾರಣಗಳು ಇವುಗಳಲ್ಲೊಂದಾಗಿರಬಹುದು. ೧> ಸರಿಯಾದ ನೀತಿ ನಿಯಮಗಳಿಲ್ಲದಿರುವುದು. ೨> ಆ ಕೆಲಸಕ್ಕೆ ಬೇಕಿರುವ ನೈಪುಣ್ಯತೆ ನಿಮ್ಮಲ್ಲಿಲ್ಲದಿರುವುದು. ೩> ಸಂಪನ್ಮೂಲದ ಕೊರತೆ ೪> ಅರಿವಿನ ಕೊರತೆ ೫> ಗಮನದ ಕೊರತೆ ೬> ತಂತ್ರಜ್ಞಾನದ ಬಳಕೆಯಲ್ಲಿನ ಕೊರತೆ. ಈ ಎಲ್ಲ ಕೊರತೆಗಳು ಒಂದಕ್ಕೊಂದು ನೆಂಟು ಹೊಂದಿವೆ. ಈ ಕೊರತೆಗಳೆಲ್ಲದರತ್ತ ನೀವು ಗಮನ ಹರಿಸಿದಲ್ಲಿ ಸಮಸ್ಯೆಯನ್ನು ಇನ್ನಷ್ಟು ಸರಿಯಾಗಿ ಬಗೆಹರಿಸಲು ಸಾಧ್ಯವಾಗಬಹುದು. ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಯಾವತ್ತೂ ಚಿಕ್ಕ ಚಿಕ್ಕ ಹೆಜ್ಜೆಗಳಲ್ಲೇ ಬರುವುದು, ಹೀಗಾಗಿ ರಾತ್ರೋರಾತ್ರಿ ಬದಲಾವಣೆ ತರುವೆ ಎಂದು ಹೊರಡುವುದು ಹೆಚ್ಚಿನ ಬಾರಿ ಅಂದುಕೊಳ್ಳದ ಇನ್ನೊಂದು ಸಮಸ್ಯೆಯ ಹುಟ್ಟಿಗೆ ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಪ್ರಣಾಳಿಕೆಯಲ್ಲಿ ಏನು ಭರವಸೆ ಕೊಡುತ್ತೀರಿ ಅನ್ನುವುದರ ಬಗ್ಗೆ ಎಚ್ಚರವಿರಲಿ.

Leave a Reply