#2 ಸಾರ್ವಜನಿಕ ಹಣಕಾಸು ವ್ಯವಸ್ಥೆ

ಸಾರ್ವಜನಿಕ ಹಣಕಾಸು ವ್ಯವಸ್ಥೆ ಅನ್ನುವುದು ಸಾರ್ವಜನಿಕರಿಗೆ ಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಪೂರೈಸಲು ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಇರುವ ಎಲ್ಲ ತೊಡಕುಗಳ ಮಧ್ಯ ಹೇಗೆ ಹೊಂದಿಸಬೇಕು ಅನ್ನುವ ವಿದ್ಯೆಯಾಗಿದೆ.ಆದರೆ ಈ ವಿಷಯ ಇಂದಿರುವಂತೆ ಕೇವಲ ಒಂದು ಸರ್ಕಾರಿ ವ್ಯವಸ್ಥೆ ಎಷ್ಟು ಹಣ ಖರ್ಚು ಮಾಡಲಿದೆ, ಮಾಡಿದೆ ಅನ್ನುವ ಲೆಕ್ಕಾಚಾರಕ್ಕೆ ಸೀಮಿತವಾಗದೇ ಆ ಖರ್ಚಿನಿಂದ ಜನರಿಗೆ ಅನುಕೂಲವಾಗುವಂತಹ ಫಲಿತಾಂಶ ಏನು ಬಂದಿದೆ ಅನ್ನುವುದನ್ನು ಅಳೆಯುವ ಕಡೆ ಹೊರಳಬೇಕಿದೆ.

1960ರ ದಶಕದಲ್ಲಿ ಸರ್ಕಾರಕ್ಕೇ ಎಲ್ಲ ಸಾಧ್ಯ ಅನ್ನುವ ಮನಸ್ಥಿತಿಯಿತ್ತು. ಆದರೆ ದಿನಗಳೆದಂತೆ ಒಂದಿಷ್ಟು ಕಡೆ ಸರ್ಕಾರಕ್ಕೆ, ಒಂದಿಷ್ಟು ಕಡೆ ಮಾರುಕಟ್ಟೆಗೆ ಇನ್ನೊಂದಿಷ್ಟು ಕಡೆ ಲಾಭರಹಿತ ಸಂಸ್ಥೆ ಹೀಗೆ ನಮ್ಮ ವ್ಯವಸ್ಥೆಯಲ್ಲಿ ಫಲಿತಾಂಶ ಆಧಾರಿತ ಬದಲಾವಣೆ ತಂದುಕೊಳ್ಳಲು ಯಾರಿಂದಾಗುವುದೋ ಅದೆಲ್ಲವನ್ನು ಬಳಸಬೇಕು, ಸರ್ಕಾರಕ್ಕೆ ತನ್ನದೇ ಆದ ಮಿತಿಯಿದೆ ಅನ್ನುವ ತಿಳುವಳಿಕೆ ಇತ್ತೀಚಿನ ದಶಕಗಳಲ್ಲಿ ಹೆಚ್ಚಿದೆ.

ಸಾರ್ವಜನಿಕ ಹಣಕಾಸು ವ್ಯವಸ್ಥೆಯ ಅಡಿಪಾಯವೇ ಸರ್ಕಾರ ವಿಧಿಸುವ ತೆರಿಗೆ. ಸರ್ಕಾರವೊಂದಕ್ಕೆ ತೆರಿಗೆ ವಿಧಿಸುವ ಹಕ್ಕಿದೆ. ಹಾಗಿದ್ದರೆ ತೆರಿಗೆಯೆಂದರೇನು? ಸರ್ಕಾರಿ ವ್ಯವಸ್ಥೆ ತನ್ನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರಿಂದ ಕಡ್ಡಾಯವಾಗಿ ವಸೂಲು ಮಾಡುವ ನಿಗದಿತ ಪ್ರಮಾಣದ ಹಣವೆನ್ನಬಹುದು. ಭಾರತದ 120 ಕೋಟಿ ಜನರಲ್ಲಿ ಕೇವಲ 3% ಜನರು ಮಾತ್ರವೇ ತೆರಿಗೆ ವ್ಯಾಪ್ತಿಯಲ್ಲಿದ್ದಾರೆ. ಹಾಗಿದ್ದರೆ ಭಾರತ ಒಂದು ಕಡಿಮೆ ತೆರಿಗೆಯ ಒಕ್ಕೂಟವೇ? ಅನ್ನುವ ಪ್ರಶ್ನೆಗೆ ಉತ್ತರ: ಇಲ್ಲ ಅನ್ನುವುದಾಗಿದೆ. ಯಾಕೆಂದರೆ ಸರ್ಕಾರ ಕಲ್ಪಿಸಬೇಕಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಇಂತಹ ಹಲವಾರು ಸೌಕರ್ಯಗಳು ಸರಿಯಾಗಿ ಪೂರೈಸಲಾಗದ ಸ್ಥಿತಿಯಲ್ಲಿ ಜನರು ಇವನ್ನು ಖಾಸಗಿ ಸಂಸ್ಥೆಗಳಿಂದ ಹಣ ತೆತ್ತು ಕೊಳ್ಳುತ್ತಿದ್ದಾರೆ. ಇದೊಂದು ನೇರವಾದ ತೆರಿಗೆಯಾಗಿಲ್ಲದೇ ಇದ್ದರೂ ಜನರು ತಮ್ಮ ಉಳಿತಾಯದ ಹಣವನ್ನೇ ಈ ಸೇವೆ ಕೊಳ್ಳಲು ಖರ್ಚು ಮಾಡುತ್ತಿರುವುದರಿಂದ ಹಾಗೇ ತೆರುತ್ತಿರುವ ಹಣವನ್ನೂ ವಾರೆ(indirect) ತೆರಿಗೆಯೆಂದೇ ನೋಡಬೇಕಿದೆ. ಹಾಗೇ ನೋಡಿದಾಗ ಭಾರತ ಒಕ್ಕೂಟ ತನ್ನ ಜನರ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವ ನಾಡು ಎಂದು ಕರೆಯಬಹುದು. ಹೀಗಾಗಿ ಸರ್ಕಾರ ಮಾಡುವ ಖರ್ಚನ್ನು ಆ ಖರ್ಚು ಎಷ್ಟರ ಮಟ್ಟಿಗೆ ಜನರಿಗೆ ಬೇಕಾದ ಅನುಕೂಲ ಕಟ್ಟಿಕೊಡುತ್ತಿದೆ ಅನ್ನುವ ನೆಲೆಯಲ್ಲಿ ಅಳೆಯಬೇಕಿದೆಯೇ ಹೊರತು ಇಂದಿರುವಂತೆ ಎಷ್ಟು ಖರ್ಚು ಮಾಡಿದೆ ಅನ್ನುವ ಹೆಗ್ಗಳಿಕೆಯ ಮೇಲಲ್ಲ.

ಉಚಿತ ನೀರು, ಕರೆಂಟ್ ಕೊಡುತ್ತೇನೆ ಅನ್ನುವುದು ಬಡವರ ಪರ ಎಂದು ಕಾಣಿಸಿಕೊಳ್ಳಬಹುದು. ಆದರೆ ಬಡತನದ ಹೆಸರಿನಲ್ಲಿ ಜಾರಿಗೆ ಬರುವ ಇಂತಹ ಹೆಚ್ಚಿನ ಯೋಜನೆಗಳು ಬಡ ಯೋಜನೆಗಳೇ ಅನ್ನಬಹುದು. ಉಚಿತ ನೀರು ಮನೆಮನೆಗೆ ಕೊಡುವ ನಿರ್ಧಾರ ಒಂದು ಪಕ್ಷ ಕೈಗೊಂಡರೆ ಅದಕ್ಕೆ ಬೇಕಿರುವ ಸಂಪನ್ಮೂಲ ಹೊಂದಿಸಲು ಇನ್ನಾರದೋ ತಲೆಯ ಮೇಲೆ ಆ ಖರ್ಚನ್ನು ಹಾಕಬೇಕಲ್ಲವೇ? ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಆ ವೆಚ್ಚ ಹಾಕಿದರೆ ಆ ಉದ್ದಿಮೆಗಳ ಉತ್ಪಾದನೆಯ ವೆಚ್ಚ ಹೆಚ್ಚಿ ಅವು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುವುದು ಕಷ್ಟವಾಗಬಹುದು ಮತ್ತು ಇದರಿಂದಾಗಿ ಅವುಗಳು ಇನ್ನೊಂದು ನಾಡಿಗೆ ವಲಸೆ ಹೋಗಬಹುದು. ಹಾಗಿದ್ದರೆ ಖಾಸಗಿಯವರಿಗೆ ಲೂಟಿ ಮಾಡಲು ಅವಕಾಶ ನೀಡಬೇಕೇ ಅಂದರೆ ಅದಕ್ಕೆ ಉತ್ತರ ಇಲ್ಲ ಅನ್ನುವುದಾಗಿದೆ. ಸರಿಯಾದ ಒಪ್ಪಂದಗಳು, ಸೋರಿಕೆ ತಡೆಗಟ್ಟುವುದು, ಯಾವುದೇ ಒಂದು ಸಂಸ್ಥೆಯ ಏಕಸ್ವಾಮ್ಯತೆ ಉಂಟಾಗದಂತೆ ನೋಡಿಕೊಳ್ಳುವುದು, ಸರಿಯಾದ ನಿರ್ವಹಣೆ, ಭ್ರಷ್ಟಾಚಾರಕ್ಕೆ ತಡೆಯುಂಟು ಮಾಡುವಂತಹ ಕ್ರಮಗಳ ಮೂಲಕ ಸರ್ಕಾರ ಈ ಸೇವೆಗಳನ್ನು ಸರಿಯಾದ ದರದಲ್ಲಿ ಎಲ್ಲರಿಗೂ ದೊರಕುವಂತೆ ಮಾಡಬಹುದು.

ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು,ಆಲ್ಲಿರುವ ಅಪಾರ ಮಾಹಿತಿಯನ್ನು ವಿಶ್ಲೇಷಿಸಿ ಸರಿಯಾದ ನಿರ್ವಹಣೆಗೆ ಏನು ಪಾಠ ಕಲಿಯಬಹುದು ಎಂದು ಕಲಿತುಕೊಳ್ಳುವುದು, ಸರಿಯಾದ ಪ್ರಶ್ನೆ ಕೇಳಿ ಕುಂದು ಕೊರತೆಗಳನ್ನು ಅರ್ಥ ಮಾಡಿಕೊಂಡು ಯೋಜನೆಗಳನ್ನು ರೂಪಿಸುವುದು ಸಾರ್ವಜನಿಕ ಜೀವನಕ್ಕೆ ಬರುವ ಪ್ರತಿಯೊಬ್ಬ ನಾಗರೀಕನು ಮಾಡಬೇಕಾದ ಕರ್ತವ್ಯವಾಗಿದೆ. ಮಾಹಿತಿಯನ್ನು ಅರ್ಥ ಮಾಡಿಕೊಂಡು ಸರಿಯಾದ ಪ್ರಶ್ನೆ ಕೇಳುವಾಗ ಒಬ್ಬ ಬುದ್ದಿವಂತ ಗ್ರಾಹಕನಂತೆ ವರ್ತಿಸಬೇಕು.

Leave a Reply